Sunday, April 24, 2011

ಶಿರಡಿ, ಸತ್ಯ ನಂತರ ಪ್ರೇಮ ಸಾಯಿಬಾಬಾ

ಸಾಯಿಬಾಬಾ


ಸತ್ಯ ಸಾಯಿಬಾಬ ಯುಗ ಇಂದಿಗೆ(ಏ.24,2011) ಅಂತ್ಯಗೊಂಡಿದೆ. ಸಾಯಿಬಾಬಾ ಅವರ ಸಾಮಾಜಿಕ ಸೇವೆಗೆ ಇಡೀ ವಿಶ್ವವೇ ತಲೆದೂಗಿದೆ. ಜಗತ್ತಿನಾದ್ಯಂತ ಇರುವ ಸುಮಾರು 6 ಮಿಲಿಯನ್ ಗೂ ಅಧಿಕ ಭಕ್ತಾದಿಗಳಿಗೆ ಬಾಬಾರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಆದರೆ, ಬಾಬಾಗೆ ಸಾವಿಲ್ಲ. ಆತ್ಮ ಅವಿನಾಶಿ, ಬಾಬಾ ಯೋಗ ನಿದ್ರೆಯಲ್ಲಿದ್ದಾರೆ. 96ನೇ ಹುಟ್ಟುಹಬ್ಬದ ದಿನದಂದು ಪುನಃ ದರ್ಶನ ನೀಡುತ್ತಾರೆ. ಸಾಯಿಬಾಬಾ ಅವತಾರ ಮುಗಿದಿಲ್ಲ ಮತ್ತೆ ಆರಂಭವಾಗುತ್ತದೆ. ಪ್ರೇಮ ಸಾಯಿಯಾಗಿ ಗೋಚರಿಸಲಿದ್ದಾರೆ ಎಂಬ ನಂಬಿಕೆ ಬಲವಾಗಿ ಭಕ್ತರ ಮನಸಲ್ಲಿ ಬೇರೂರಿದೆ.


96 ವಸಂತಗಳನ್ನು ಕಳೆದ ನಂತರ ಇಹಲೋಕ ತ್ಯಜಿಸುತ್ತೇನೆ. ನಂತರ ಕರ್ನಾಟಕದ ಮಂಡ್ಯಜಿಲ್ಲೆಯ ಗುಣಪರ್ತಿಯಲ್ಲಿ ಪ್ರೇಮ ಸಾಯಿಯಾಗಿ ನಿಮ್ಮ ಮುಂದೆ ಬರುತ್ತೇನೆ. 2023ರ ತನಕ ನನಗಾಗಿ ಕಾಯುತ್ತಿರಿ ಎಂದು ಸ್ವತಃ ಸಾಯಿಬಾಬಾ ಒಮ್ಮೆ ಹೇಳಿದ್ದರು.


ಬಾಬಾ ಇಚ್ಛಾಮರಣಿಯೇ?: ಹೌದು ಎನ್ನುತ್ತದೆ ಭಕ್ತ ಸಮೂಹ. ನನಗೆ ಬೇಕೆನಿಸಿದಾಗ ಈ ದೇಹ ತ್ಯಾಗ ಮಾಡುತ್ತೇನೆ. ಆದರೂ 96 ವರ್ಷ ಯಾವುದೇ ಮಾರಣಾಂತಿಕ ಕಾಯಿಲೆ ನನ್ನನ್ನು ಬಾಧಿಸದು, 96 ವರ್ಷ ನಿಮ್ಮೊಡನಿರುತ್ತೇನೆ ಎಂದಿದ್ದರು ಆದರೆ, 86 ವರ್ಷಕ್ಕೆ ಅವತಾರ ಮುಗಿಸಿರುವುದು ಸ್ವಲ್ಪ ಗೊಂದಲ ಉಂಟಾಗಿದೆ. ಮಾನವರನ್ನು ಬಾಧಿಸುವ ಕಾಯಿಲೆಯನ್ನು ತಮ್ಮ ದೇಹದಲ್ಲಿ ಆವರಿಸಿಕೊಂಡು ಬಾಬಾ ಯೋಗ ನಿದ್ರೆಗೆ ತೆರಳಿದ್ದಾರೆ. ಅವರೇ ಹೇಳಿದಂತೆ ಆತ್ಮಕ್ಕೆ ಸಾವಿಲ್ಲ. ಬಾಬಾ ಭಕ್ತರನ್ನು ಕೈಬಿಡುವುದಿಲ್ಲ. ಮತ್ತೆ ಅವತರಿಸುತ್ತಾರೆ ಎಂದು ಭಕ್ತರು ನಂಬಿದ್ದಾರೆ.


ಮಂಡ್ಯ ಕಡೆ ಎಲ್ಲರ ಕಣ್ಣು: ಮಂಡ್ಯದ ಪುಟ್ಟ ಗ್ರಾಮ ಗುಣಪರ್ತಿ ಮೇಲೆ ಎಲ್ಲರ ಕುತೂಹಲದ ನೋಟ ನೆಟ್ಟಿದೆ. ಶಿರಡಿ ಸಾಯಿಬಾಬಾ ಪರಂಪರೆಯ ಕೊನೆಯ ಅವತಾರವಾದ ಪ್ರೇಮ ಸಾಯಿಬಾಬಾ 2023ರ ಹೊತ್ತಿಗೆ ಪ್ರಕಟವಾಗುತ್ತೇನೆ ಎಂದು ಬಾಬಾ ಹೇಳಿದ್ದರು. ಪ್ರೇಮ ಸಾಯಿಬಾಬಾರ ತಾಯಿಯಾಗಿ ಕಸ್ತೂರಿ ಎಂಬ ಹೆಣ್ಣು ಮಗಳು ಕಾಣಿಸಿಕೊಳ್ಳಲಿದ್ದಾರೆ ಎಂದು 2008ರಲ್ಲಿ ಬಾಬಾ ಅಶ್ರಮದಿಂದ ಸುದ್ದಿ ಹೊರ ಬಿದ್ದಿತ್ತು. ಜಾನ್ ಹಿಸ್ಲಾಪ್ ಎಂಬ ಸಾಯಿಬಾಬಾ ಭಕ್ತ ಪ್ರೇಮ ಸಾಯಿಬಾಬಾ ಚಿತ್ರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದರು.


ಬಾಬಾರ ಪವಾಡಗಳನ್ನು ನಂಬುವ ಭಕ್ತರಿಗೆ, ಅವರ ಸಾಮಾಜಿಕ ಸೇವೆಯನ್ನು ಮೆಚ್ಚುವ ಜನರಿಗೆ, ಮಾನಸಿಕ ಬೆಂಬಲ ಲಾಭ ಪಡೆಯುತ್ತಿದ್ದ ಕ್ರಿಕೆಟ್ಟಿಗರಿಗೆ, ಆಧುನಿಕ ಭಗೀರಥನಂತೆ ಕಂಡ ಬರದ ನಾಡಿನ ಜನರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಬಾಬಾ ಎಂಬ ವಿಸ್ಮಯ ಜೀವ ಎಂದಿಗೂ ಶಾಶ್ವತ.