Thursday, July 28, 2022

ಸತ್ಸಂಗ

 ಆದರಣೀಯ ಸತ್ಸಂಗ ಬಂಧುಗಳೇ ,ಎಲ್ಲರಿಗೂ ನಮಸ್ಕಾರ.

1940 ರಿಂದ2010 ರವರೆಗೆ ಸುಮಾರು ಎಪ್ಪತ್ತು ವರ್ಷಗಳು ಬದುಕಿದ್ದು, ತಮ್ಮ ಜೀವಿತಾವಧಿಯಲ್ಲಿ ಲಕ್ಷಾಂತರ ಜನರ ಸಂಕಷ್ಟಗಳನ್ನು ಪರಿಹರಿಸಿ ನಮ್ಮ ನಾಡಿಗೆ ಬೆಳಕಾಗಿದ್ದ, ಸಖರಾಯಪಟ್ಟಣದ ಶ್ರೀ ವೆಂಕಟಾಚಲ ಅವಧೂತರು ಇಂದು ಮುಕ್ತರಾದ ದಿನ. ಅವರು ದೇಹವನ್ನು ತ್ಯಜಿಸಿ ಇವತ್ತಿಗೆ 12 ವರ್ಷಗಳಾಗಿವೆ.

ಸೊಂಟಕ್ಕೊಂದು ತುಂಡು ವಸ್ತ್ರವನ್ನು ಸುತ್ತಿಕೊಂಡು ಯಾವ ಆರೈಕೆ ಉಪಚಾರಗಳನ್ನೂ ಕಾಣದ ದೇಹದೊಂದಿಗೆ ತಮ್ಮ ಆಯುಷ್ಯವನ್ನೆಲ್ಲಾ ಕಳೆದ ಇವರು, ಸಂಸಾರಿಗಳಾಗಿ ಇದ್ದರೂ ಸಹ ಅತ್ಯಂತ ತ್ಯಾಗಮಯ ಜೀವನ ನಡೆಸಿ ,ಸದಾ ಆತ್ಮ ನಿಷ್ಠರಾಗಿದ್ದು, ವಿರಕ್ತ ರಾಜಯೋಗಿಗಳಾಗಿದ್ದರು. ಲಕ್ಷಾಂತರ ಜನರ ಸಂಕಷ್ಟಗಳನ್ನು ಪರಿಹರಿಸಿ ಎಲ್ಲರಿಗೂ ದಾರಿದೀಪವಾಗಿ ಇದ್ದರು.

ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಬನ್ನಿ ಎಂದು ಯಾರನ್ನು ಅವರು ಮನೆಗೆ ಕರೆಯಲಿಲ್ಲ. ಆದರೆ ಅವರನ್ನರಸಿ ಬಂದ ನೂರಾರು ಜನರನ್ನು ಸತ್ಕರಿಸಿ ,ಅವರನ್ನು ಪ್ರೇಮದಿಂದ ಕಂಡು, ಅವರ ಸಮಸ್ಯೆಗಳನ್ನು ಸುಲಭೋಪಾಯ ದಿಂದ ಪರಿಹರಿಸುತ್ತಿದ್ದರು.

ಗುರುನಾಥರ ಸಂಪರ್ಕಕ್ಕೆ ಬಂದ ಸಾವಿರಾರು ಜನ ಇವರ ಶಿಷ್ಯರಾದರೂ ಕೂಡ, ಇವರು ಆಶ್ರಮವನ್ನು ಕಟ್ಟಲಿಲ್ಲ, ಮತ್ತು ಪ್ರಚಾರವನ್ನೂ ಬಯಸಲಿಲ್ಲ. ನಿಮ್ಮ ಆಶ್ರಮ ಯಾವುದು ಎಂದು ಯಾರಾದರೂ ಕೇಳಿದರೆ, ಆಶ್ರಮ ಕಟ್ಟುವ ಶ್ರಮ ನನಗೇಕೆ ಎಂದು ಮಾರ್ಮಿಕವಾಗಿ ಉತ್ತರಿಸುತ್ತಿದ್ದರು. ಇವರ ಸಂಪರ್ಕಕ್ಕೆ ಬಂದ ಸಾವಿರಾರು ಜನರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಂಡರು.

ನಮ್ಮಂಥ ಪ್ರಾಪಂಚಿಕರಿಗೆ ಹಾಗೂ ಸಾಧಕರಿಗೆ ಬೋಧಿಸುತ್ತಿದ್ದ ನೂರಾರು ಉಪಾಯಗಳಲ್ಲಿ ಕೆಲವನ್ನು ಇಲ್ಲಿ ನೆನಪಿಸಲಾಗುತ್ತಿದೆ.

1. ರಾಶಿ ರಾಶಿ ಹೂವುಗಳನ್ನು ಅರ್ಪಿಸುವುದಕ್ಕಿಂತ ಹೂವಿನಂಥ ಮನಸ್ಸನ್ನು ಭಗವಂತನಿಗೆ ಅರ್ಪಿಸು.

2. ಲಕ್ಷ ಬಿಲ್ವಾರ್ಚನೆ ಗಿಂತ ಲಕ್ಷ್ಯವಿಟ್ಟು, ಬಿಲ್ವ ದಳವೊಂದನ್ನು ಅರ್ಪಿಸು.

3. ಗುರುಪಾದ ಪೂಜೆಗಿಂತ ಗುರುಪದ ಪೂಜೆಯೇ ಶ್ರೇಷ್ಠ.

4. ಪರಮಾನಂದವು ಹೊರಗೆಲ್ಲೂ ಇಲ್ಲ. ನಮ್ಮ ಅಂತರಂಗದೊಳಗೆ ಇದೆ. ಅಂತರಂಗ ಶೋಧನೆಯಿಂದ ಪರಮಾನಂದವನ್ನು ಸಾಧಿಸಬಹುದಾಗಿದೆ.

5. ಒಂದು ವೇಳೆ ಮಂತ್ರ ತಪ್ಪಿದರೂ ಮಾತು ತಪ್ಪ ಬೇಡ. ಅಂದರೆ ನಮ್ಮ ಭಾವನೆಗಳನ್ನು, ನಡವಳಿಕೆಗಳನ್ನು, ಸದಾ ಎಚ್ಚರದಿಂದ ಗಮನಿಸುತ್ತಿರಬೇಕು.

6. ಸನ್ಯಾಸ ಮನಸ್ಸಿಗೆ ಹೊರತು ,ದೇಹಕ್ಕಲ್ಲ.

7. ಗುರು ಎಂದರೆ ವಾಕ್ಯ ಪ್ರಮಾಣವೇ ಹೊರತು, ದೇಹ ಪ್ರಮಾಣವಲ್ಲ.

8. ಸಂತರಿಗೆ ಅರ್ಪಣೆಯೇ ಸಂತರ್ಪಣೆ. ಸಮಾನವಾದ ಆದರಿಸುವಿಕೆಯೇ ಸಮಾರಾಧನೆ.

9. ನಮ್ಮ ದಿನಚರಿಗಳನ್ನು ಬರೆದು ಕೊಳ್ಳುವುದಕ್ಕಿಂತ,  ಆ ಭಗವಂತನು ಬರೆದಿರುವ ನಮ್ಮ ದಿನಚರಿಯನ್ನು  ಓದಿಕೊಳ್ಳುವುದು ಮೇಲಲ್ಲವೇ?

10. ನಿನ್ನನ್ನು ನೀನು ತಿಳಿದುಕೊಳ್ಳಲಿಕ್ಕೆ ನಿನಗೆ ಸಮಯ ಸಾಕಾ ಗದಿರುವಾಗ ,ಅನ್ಯರ ನಡವಳಿಕೆ ಮತ್ತು ಭಾವನೆಗಳ ಗೊಡವೆ ನಿನಗೇಕೆ?

11. ಹಿರಿಯರು ಬದುಕಿದ್ದಾಗ ಅವರನ್ನು ಶ್ರದ್ಧೆಯಿಂದ ನೋಡಿಕೊಳ್ಳುವುದು ನಿಜವಾದ ಶ್ರಾದ್ಧ. ಆ ನಂತರ ಮಾಡುವುದೆಲ್ಲ ಬರೀ ಕಲಾಪಗಳು.


ಗುರುನಾಥರು ದೇಹವನ್ನೇನೋ ತ್ಯ ಜಿಸಿರಬಹುದು, ಆದರೆ ಚೈತನ್ಯ ರೂಪದಲ್ಲಿ ವಿಶ್ವವ್ಯಾಪಿ ಆಗಿದ್ದಾರೆ ಮತ್ತು ಪ್ರಾತಃಸ್ಮರಣೀಯರಾ ಗಿದ್ದಾರೆ.

ಗುರುನಾಥರು ವಿಶ್ವವ್ಯಾಪಿಯಾದ ಈ ದಿನ ನಾವೆಲ್ಲರೂ ಗುರು ಸ್ಮರಣೆಯಲ್ಲಿ ಮಿಂದು ಧನ್ಯರಾಗೋಣ.


ಜೈ ಸದ್ಗುರುನಾಥ 🙏

No comments:

Post a Comment